ಕ್ರಿಸ್ತದನಿ
ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. 'ಕ್ರಿಸ್ತದನಿ' ಯೂಟ್ಯೂಬ್ ಚಾನಲ್ನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ಕ್ರೈಸ್ತ ಧಾರ್ಮಿಕ ಭಕ್ತಿಗೀತೆಗಳು ಮುಂತಾದವು ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ ಆಶಯ. ಇವನ್ನು ಕ್ರೋಢೀಕರಿಸಿ ಯೂಟ್ಯೂಬ್ ಚಾನಲ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ನದ ಫಲವಿದು. ಇದನ್ನು ಬಳಸುತ್ತಾ ಉತ್ತಮವಾಗಿಸುವ ಯತ್ನದಲ್ಲಿ ನಿಮ್ಮ ಅನಿಸಿಕೆಗಳು ನಮಗೆ ಉತ್ತೇಜನಕಾರಿ. ನಿಮ್ಮ ಅಭಿಪ್ರಾಯಗಳನ್ನು ನಮಗೆ ಮುಕ್ತವಾಗಿ ತಿಳಿಸಿ ಕ್ರಿಸ್ತದನಿಯ ಉತ್ತಮಿಕೆಯಲ್ಲಿ ನೆರವಾಗಿರಿ.
Disclaimer: The content mentioned in this You Tube is only for religious purpose and we do not have any trade or business intention. We are not the real owners of all the contents, and it is only compilation of religious contents from different sources for the benefit of people. For any copyright issues, contact - kristadani2311@gmail.com


Krista Dani

11-10-26
ಅಕ್ಟೋಬರ್ - 11 - ಭಾನುವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೆಂಟನೇ ಭಾನುವಾರ
ಪೂಜಾವಿಧಿ ವರ್ಷ- 1
ಕೀರ್ತನಾ ಮಂಜರಿ: ವಾರ 4
ಪೂಜಾವಸ್ತ್ರ: ಹಸಿರು

ಸಂತ 23ನೇ ಜಾನ್ (ವಿಶ್ವಗುರು)

ದೈವವಾಕ್ಯದ ವಿಧಿ
"ದೈವ ಮೌಲ್ಯಗಳೇ ದೇವರು ಬಯಸುವ ಉಡುಪು"

ಮೊದಲನೆಯ ವಾಚನ
ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 25:6-10

"ಸರ್ವೇಶ್ವರ ಭೋಜನವನ್ನು ಅಣಿಗೊಳಿಸುವರು; ಎಲ್ಲರ ಕಣ್ಣೀರನ್ನು ಒರೆಸಿಬಿಡುವರು"

ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರಸ್ವಾಮಿಯೇ ಇಂತೆಂದು ನುಡಿದಿದ್ದಾರೆ.
"ಇದು ನೆರವೇರಿದಾಗ ಜನರು:
"ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು.
ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು.
ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!"
ಎಂದು ಹೇಳಿಕೊಳ್ಳುವರು. ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲೆಸುವುದು."

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 23:1-6 v.6
ಶ್ಲೋಕ: ದೇವರ ಮಂದಿರದಲ್ಲಿ ನಾ ವಾಸಿಸುವೆ ಚಿರಕಾಲವೆಲ್ಲ

1. ಪ್ರಭು ಕುರಿಗಾಹಿಯಾಗಿರಲು ನನಗೆ
ಕುಂದುಕೊರತೆಗಳೆಲ್ಲಿಯವು ಎನಗೆ?
ಹಸಿರುಗಾವಲುಗಳಲೆನ್ನ ತಂಗಿಸುವನು
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ
ಶ್ಲೋಕ

2. ಸನ್ಮಾರ್ಗದಲಿ ನಡೆಸುವನು ತನ್ನ ನಾಮ ನಿಮಿತ್ತ
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ
ಶ್ಲೋಕ

3. ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು
ಹಚ್ಚುವೆ ತಲೆಗೆ ತೈಲವನು, ತುಂಬಿ ತುಳುಕಿಸುವೆ ಪಾನಪಾತ್ರೆಯನು
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ
ಶ್ಲೋಕ

ಎರಡನೆಯ ವಾಚನ
ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 4:12-14, 19-20

"ಸರ್ವೇಶ್ವರನ ಶಕ್ತಿಯಿಂದ ಸರ್ವವನ್ನು ಸಾಧಿಸುವ ಸಾಮರ್ಥ್ಯ ನನಗಿದೆ"

ಸಹೋದರರೇ, ಬಡತನವಿರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ. ಸರ್ವೇಶ್ವರನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ. ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯಮಾಡಿದುದು ನಿಮ್ಮ ಸೌಜನ್ಯವೇ ಸರಿ. ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತ ಯೇಸುವಿನ ಮುಖಾಂತರ ಪೂರೈಸುವರು. ನಮ್ಮ ತಂದೆಯಾದ ದೇವರಿಗೆ ನಿರಂತರವೂ ಮಹಿಮೆ ಸಲ್ಲಲಿ!.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಘೋಷಣೆ (ಯೊವಾನ್ನ 8:12)
ಅಲ್ಲೆಲೂಯ, ಅಲ್ಲೆಲೂಯ.
ನಾನೇ ಜಗಜ್ಯೋತಿ; ನನ್ನನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ
ಅಲ್ಲೆಲೂಯ.

ಶುಭಸಂದೇಶ
ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 22:1-14
ಪ್ರಭು ನಿಮಗೆ ಮಹಿಮೆ ಸಲ್ಲಲಿ

"ನೀವು ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ"

ಆ ಕಾಲದಲ್ಲಿ ಯೇಸು ಮುಖ್ಯ ಯಾಜಕರೊಂದಿಗೂ ಫರಿಸಾಯರೊಂದಿಗೂ ಸಾಮತಿಗಳಲ್ಲೇ ಮಾತನಾಡುತ್ತಾ, "ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಮಗನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. ಪುನಃ ಬೇರೆ ಸೇವಕರನ್ನು ಅಟ್ಟಿದ. 'ಔತಣ ಸಿದ್ದವಾಗಿದೆ, ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ' ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ. ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ, ಅವರ ಊರನ್ನು ಸುಟ್ಟುಹಾಕಿಸಿದ. ಅನಂತರ ತನ್ನ ಸೇವಕರಿಗೆ, 'ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ' ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದು ತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. 'ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?' ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನ ತಳೆದ. ಆಗ ರಾಜನು ಪರಿಚಾರಕರಿಗೆ, 'ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲು ಕಡಿದು ಗೋಳಾಡಲಿ,' ಎಂದು ಹೇಳಿದ. 'ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ'," ಎಂದರು ಸ್ವಾಮಿ.

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

ಆಮೆನ್

13 hours ago | [YT] | 13

Krista Dani

10-10-26
ಅಕ್ಟೋಬರ್ - 10 - ಶನಿವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಸಂತ ಫ್ರಾನ್ಸಿಸ್ ಬೋರ್ಜರಿಯಾ ಹಾಗೂ ಸಂತ ಡ್ಯಾನಿಯಲ್ ಕೊಂಬೊನಿ (ಸ್ಮರಣೆ)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 3:22-29

"ಕ್ರಿಸ್ತ ಯೇಸುವಿನಲ್ಲಿಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ."

ಸಹೋದರರೇ, ಸಮಸ್ತ ಲೋಕವೂ ಪಾಪಕ್ಕೆ ಒಳಗಾಯಿತು ಎಂದು ಪವಿತ್ರ ಗ್ರಂಥ ಸ್ಪಷ್ಟೀಕರಿಸುತ್ತದೆ. ಹೀಗೆ, ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ. ಕ್ರೈಸ್ತ ವಿಶ್ವಾಸದ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು. ಅಂತೆಯೇ ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತ ಯೇಸು ಬರುವತನಕ ಅದು ನಮಗೆ ಕಾವಲಾಗಿತ್ತು. ಈಗ ಕ್ರೈಸ್ತ ವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ. ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ. ಹೇಗೆಂದರೆ ಕ್ರಿಸ್ತ ಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಂಬರರಾಗಿದ್ದೀರಿ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ-ಧಣಿ, ಗಂಡು-ಹೆಣ್ಣು ಎಂಬ ಭೇದವಿಲ್ಲ. ನೀವು ಕ್ರಿಸ್ತ ಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಆಗಿದ್ದೀರಿ. ದೈವ ವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ: 105:2-7, V.8
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು.

1. ಧ್ಯಾನಿಸಿ ನೀವು ಆತನ ಪವಾಡಗಳನು
ಹೆಮ್ಮೆಪಡಿ, ನೆನೆದಾತನ ಶ್ರೀ ನಾಮ
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ
ಶ್ಲೋಕ

2. ಅರಸಿರಿ ಪ್ರಭುವನು ಆತನ ಶಕ್ತಿಯನೂ
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು
ಆತನ ದಾಸ, ಅಬ್ರಹಾಮನ ಸಂತತಿಯವರೇ
ಆತನಾರಿಸಿಕೊಂಡ ಯಕೋಬನ ವಂಶದವರೇ
ಶ್ಲೋಕ

3. ನೆನೆಯಿರಿ ಆತನದ್ಬುತಗಳನು, ಮಹತ್ಕಾರ್ಯಗಳನು
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು
ಪ್ರಭು ನಮ್ಮ ದೇವರೆಂಬುದು ಶ್ರುತ
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ
ಶ್ಲೋಕ

ಘೋಷಣೆ (ಕೀರ್ತನೆ 119:105)
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ವಾಕ್ಯ ನನಗೆ ದಾರಿದೀಪ ನನ್ನ ಕಾಲಿನ ನಡೆಗೆ ಕೈದೀಪ
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 11:27-28
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ನಿಮ್ಮನ್ನು ಉದರದಲ್ಲಿ ಹೊತ್ತು ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು, ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು."

ಆ ಕಾಲದಲ್ಲಿ ಯೇಸು ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, "ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!" ಎಂದು ಕೂಗಿ ಹೇಳಿದಳು. ಅದಕ್ಕೆ ಯೇಸು, "ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!" ಎಂದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

1 day ago | [YT] | 16

Krista Dani

09-10-26
ಅಕ್ಟೋಬರ್ - 09 - ಶುಕ್ರವಾರ

ಪವಿತ್ರ ಬೈಬಲ್ ದಿನಚರಿ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಸಂತ ಜಾನ್ ಹೆನ್ರಿ ನ್ಯೂಮನ್ (ಯಾಜಕ) (ವಯಸ್ಸು -89) (1801-1890)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 3:7-14

"ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನು ಪಡೆಯುವರು"

ಸಹೋದರರೇ, ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ. ಈ ವಿಶ್ವಾಸದ ಮೂಲಕವೇ ಅನ್ಯ ಧರ್ಮೀಯರನ್ನು ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರ ಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, "ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಪಡೆಯುವುವು ಎಂಬ ಶುಭ ವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು. ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು. ಧರ್ಮಶಾಸ್ತ್ರದ ವಿಧಿ ನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು ಶಾಪಗ್ರಸ್ತರು; ಏಕೆಂದರೆ, "ಧರ್ಮಗ್ರಂಥದಲ್ಲಿ ಬರೆದಿರುವುದೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು," ಎಂದು ಲಿಖಿತವಾಗಿದೆ. ಇದಲ್ಲದೆ ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಏಕೆಂದರೆ, ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಲಿಲ್ಲ. ಬದಲಿಗೆ, ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ ಎಂದು ಬರೆಯಲಾಗಿದೆ. ಮರಕ್ಕೆ ತೂಗುಹಾಕಲಾದ ಪ್ರತಿಯೊಬ್ಬನೂ ಶಾಪಗ್ರಸ್ತನು, ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತ ಯೇಸು ಶಾಪಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು. ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತ ಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು. ವಿಶ್ವಾಸದ ಮೂಲಕವಾಗಿ ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 111:1-6 v.5
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ.

1. ಸಜ್ಜನರ ಸಂಘದೊಳು ಸಭಾಸದಸ್ಯರೊಳು ಕೂಡಿ ಹೊಗಳುವೆ ಪ್ರಭುವನು ಮನಃಪೂರ್ವಕವಾಗಿ ಹಾಡಿ
ಮಹತ್ತಾದವು ಪ್ರಭುವಿನಾ ಕಾರ್ಯಗಳು
ಕೊಂಡಾಡುವರು ಅವುಗಳನ್ನು ಭಕ್ತಾದಿಗಳು
ಶ್ಲೋಕ

2. ಘನತೆ ಗೌರವವುಳ್ಳವು ಆತನ ಎಲ್ಲ ಕಾರ್ಯ
ನಿಲ್ಲುವುದು ಆತನ ನ್ಯಾಯನೀತಿಯು ನಿತ್ಯ ಆತನ ಅದ್ಭುತ ಕಾರ್ಯ ಸ್ಮರಣೀಯ
ಕರುಣಾವಂತ ಪ್ರಭು, ಪ್ರೀತಿಮಯ
ಶ್ಲೋಕ

3. ಆಹಾರವನ್ನೀಯುವನು ಭಯಭಕ್ತಿಯುಳ್ಳವರಿಗೆ
ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ
ತನ್ನ ಪ್ರಜೆಗಿತ್ತಿಹನು ಅನ್ಯ ಜನರ ಸೊತ್ತನು
ತೋರ್ಪಡಿಸಿಹನು ಈ ಪರಿ ತನ್ನ ಸಾಮರ್ಥ್ಯವನು
ಶ್ಲೋಕ

ಘೋಷಣೆ (ಕೀರ್ತನೆ 119:88)
ಅಲ್ಲೆಲೂಯ, ಅಲ್ಲೆಲೂಯ.
ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು ಕೈಗೊಳ್ಳುವೆನಾಗ ನಿನ್ನ ಬಾಯುಸುರಿದ ಕಟ್ಟಳೆಗಳನು
ಅಲ್ಲೆಲೂಯ.

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 11:15-26
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ"

ಆ ಕಾಲದಲ್ಲಿ ಜನರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪು ಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು. ಯೇಸು ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ. ಅದು ಮರಳಿ ಬಂದಾಗ ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ," ಎಂದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

2 days ago | [YT] | 21

Krista Dani

08-10-26
ಅಕ್ಟೋಬರ್ - 08 - ಗುರುವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಸಂತ ಜಾನ್ ಲಿಯೊನಾರ್ಡಿ (ಯಾಜಕ) (ವಯಸ್ಸು -68) (1541-1609)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 3:1-5

"ನೀವು ಪವಿತ್ರಾತ್ಮರನ್ನು ಪಡೆದದು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ವಿಶ್ವಾಸಿಸಿದ್ದರಿಂದಲೋ?"

ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೆ ಚಿತ್ರಿತಗೊಳಿಸಲಿಲ್ಲವೆ? ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ. ನೀವು ಪವಿತ್ರಾತ್ಮರನ್ನು ಪಡೆದದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ? ನೀವು ಪವಿತ್ರಾತ್ಮಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೊ? ನೀವು ಅಷ್ಟು ಮತಿಗೆಟ್ಟವರೊ? ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದವು ಎಂದು ಹೇಳೋಣವೇ? ದೇವರು ನಿಮಗೆ ಪವಿತ್ರಾತ್ಮರನ್ನು ಪ್ರದಾನಮಾಡಿ, ಮಹತ್ಕಾರ್ಯಗಳನ್ನು ಎಸಗುತ್ತ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ, ಶುಭಸಂದೇಶವನ್ನು ಕೇಳಿ ವಿಶ್ವಾಸವಿಟ್ಟಿರುವುದರಿಂದ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ ಲೂಕ 1:69-75, V.68
ಶ್ಲೋಕ: ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ.

1. ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು
ನಮಗೊಬ್ಬ ಶಕ್ತಿಯುತ ಮುಕ್ತಿದಾತನನು
ಪುರಾತನ ಕಾಲದಿಂದಲೇ, ಪೂಜ್ಯ ಪ್ರವಾದಿಗಳ ಬಾಯಿಂದಲೇ
ಅರುಹಿಸಿರುವನು ಇಂತೆಂದು ನಮಗೆ
ಶ್ಲೋಕ

2. ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ
ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ
ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಮಾಣಿಸಿದ ಪ್ರೀತಿಯನು
ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು
ಶ್ಲೋಕ

3. ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ
ನಮಗಿತ್ತಿರುವರು ಶತ್ರುಗಳಿಂದ ರಕ್ಷಿಸುವನೆಂಬ ಅಭಯ
ಶ್ಲೋಕ

ಘೋಷಣೆ (ಕೀರ್ತನೆ 119:36,29)
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ಕಟ್ಟಳೆಯ ಕಡೆ ಎನ್ನ ಮನವ ತಿರುಗಿಸಯ್ಯಾ ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 11:5-13
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ಕೇಳಿರಿ, ನಿಮಗೆ ದೊರಕುವುದು"

ಆ ಕಾಲದಲ್ಲಿ ಯೇಸು ಶಿಷ್ಯರಿಗೆ ಹೀಗೆಂದರು: “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡು ರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ ‘ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’ ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

3 days ago | [YT] | 20

Krista Dani

07-10-26
ಅಕ್ಟೋಬರ್ - 07 - ಬುಧವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಬಿಳಿ

ಜಪಮಾಲೆಯ ಮಾತೆ (ಸ್ಮರಣೆ)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 2:1-2, 7-14

"ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಅವರು ಒಪ್ಪಿಕೊಂಡರು."

ಸಹೋದರರೇ, ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ. ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯ ಧರ್ಮೀಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲಿ ಈಗ ಪಡುತ್ತಿರುವ ಶ್ರಮವಾಗಲಿ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ. ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾ ಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಆ ಗಣ್ಯವ್ಯಕ್ತಿಗಳು ಒಪ್ಪಿಕೊಂಡರು. ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನ್ನನ್ನು ಪ್ರೇರೇಪಿಸಿದ್ದಾರೆ. ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು, ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು. ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು. ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾ ಮುಖಿಯಾಗಿ ಖಂಡಿಸಿದೆ. ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟ ಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು. ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು. ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ; "ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ಧಿಯಲ್ಲವೆ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?" ಎಂದು ಕೇಳಿದೆ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 117:1,2 v.ಮಾರ್ಕ 16:15
ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.

1. ಸ್ತುತಿಮಾಡಿ ಪ್ರಭುವನ್ನು ಸಮಸ್ತ ರಾಷ್ಟ್ರಗಳೇ
ಆತನನು ಹೊಗಳಿ ಹಾಡಿ ಸರ್ವ ಜನಾಂಗಗಳೇ
ಶ್ಲೋಕ

2. ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ
ಆತನ ಸತ್ಯಪರತೆ ಇರುವುದು ಅನಂತ ಕಾಲ
ಶ್ಲೋಕ

ಘೋಷಣೆ: ಕೀರ್ತನೆ 119:33
ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ ನಿನ್ನ ಶಾಸ್ತ್ರದ ಅರಿವನು ಪೂರ್ಣಮನದಿಂದ ಆಚರಿಸುವೆನದನು
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 11:1-4
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ಪ್ರಭೂ, ಪ್ರಾರ್ಥನೆ ಮಾಡುವುದನ್ನು ನಮಗೂ ಕಲಿಸಿಕೊಡಿ"

ಆ ಕಾಲದಲ್ಲಿ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದಮೇಲೆ ಶಿಷ್ಯರಲ್ಲಿ ಒಬ್ಬನು, "ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ," ಎಂದನು. ಅದಕ್ಕೆ ಯೇಸು ಇಂತೆಂದರು: "ನೀವು ಹೀಗೆ ಪ್ರಾರ್ಥನೆ ಮಾಡಬೇಕು:
"ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ, ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ, ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ."

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

4 days ago | [YT] | 18

Krista Dani

06-10-26
ಅಕ್ಟೋಬರ್ - 06 - ಮಂಗಳವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಸಂತ ಬ್ರೂನೋ (ಯಾಜಕ/ಸಂಸ್ಥಾಪಕ) (ವಯಸ್ಸು -71) (1030-1101)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 1:13-24

"ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು."

ಸಹೋದರರೇ, ಹಿಂದೊಮ್ಮೆ ನಾನು ಯೆಹೂದ್ಯನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸ ಮಾಡಲು ಪ್ರಯತ್ನಿಸಿದೆ. ಇದಲ್ಲದೆ, ನಾನು ನನ್ನ ಪೂರ್ವಜರ ಮತ ಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಠೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ. ಆದರೆ, ನಾನಿನ್ನೂ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು. ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ. ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ. ಅಲ್ಲಿಂದ ದಮಸ್ಕಸ್ ನಗರಕ್ಕೆ ಹಿಂದಿರುಗಿದೆ. ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಆತನೊಂದಿಗೆ ತಂಗಿದ್ದೆ. ಆಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತರನ್ನೂ ನಾನು ಕಾಣಲಿಲ್ಲ. ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ ಎಂಬುದಕ್ಕೆ ದೇವರೇ ಸಾಕ್ಷಿ. ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ. ಆಗ ಜುದೇಯ ಪ್ರಾಂತ್ಯದಲ್ಲಿದ್ದ ಕ್ರೈಸ್ತ ಸಭೆಗಳಿಗೆ ನನ್ನ ಪರಿಚಯವಾಗಿರಲಿಲ್ಲ. ‘ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶ ಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರ ಮಾಡುತ್ತಿದ್ದಾನೆ’, ಎಂಬ ಸುದ್ದಿಯನ್ನು ಮಾತ್ರ ಕೇಳಿದ್ದರು. ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ: 139 : 1-3, 13-14, 15, V.24
ಶ್ಲೋಕ: ಪ್ರಭು, ನಡೆಸೆನ್ನನು ಆ ಸನಾತನ ಪಥದಲಿ.

1. ಪ್ರಭೂ, ಪರಿಶೋದಿಸಿರುವೆ ನೀ ನನ್ನನು
ಅರಿತುಕೊಂಡಿರುವ ಅಂತರಂಗವನು
ನಾ ಕೂರುವುದು ಏಳುವುದೂ ನಿನಗೆ ಗೊತ್ತಿದೆ
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ
ನನ್ನ ನಡತೆಯೆಲ್ಲವೂ ನಿನಗೆ ಸುಪರಿಚಿತ
ಶ್ಲೋಕ

2. ನನ್ನ ಅಂತರಂಗವನು ಉಂಟುಮಾಡಿದಾತ ನೀನು
ತಾಯ ಗರ್ಭದಲೇ ನನ್ನ ರೂಪಿಸಿದಾತ ನೀನು
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ
ಶ್ಲೋಕ

3. ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ
ನನ್ನ ಅಸ್ಥಿಪಂಜರವನು ರೂಪಿಸುವಾಗ
ತಾಯ ಗರ್ಭದೊಳು ಅಚ್ಚರದಿ ರಚಿಸುವಾಗ
ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ
ಮರೆಯಾಗಲಿಲ್ಲ ನಾನು ನಿನಗಾಗ
ಶ್ಲೋಕ

ಘೋಷಣೆ (ಕೀರ್ತನೆ 119:27)
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:38-42
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ಮಾರ್ತಳು ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ"

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದದ ಬಳಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೆ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

5 days ago | [YT] | 18

Krista Dani

05-10-26
ಅಕ್ಟೋಬರ್ - 05 - ಸೋಮವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಸಂತ ಮರಿಯಾ ಫೌಸ್ಟಿನಾ ಕೊವಾಲ್ಕ್ಸಾ (ಧಾರ್ಮಿಕ ಸಹೋದರಿ) (ವಯಸ್ಸು -33) (1905-1938)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಪೌಲನು ಗಲಾತ್ಯರಿಗೆ ಬರೆದ ಪತ್ರದಿಂದ ಇಂದಿನ ವಾಚನ 1:6-12

"ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ. ಯೇಸುಕ್ರಿಸ್ತರೇ ನನಗದನ್ನು ಶ್ರುತುಪಡಿಸಿದರು."

ಕ್ರಿಸ್ತಯೇಸುವಿನ ಅನುಗ್ರಹದಿಂದ ನಿಮ್ಮನ್ನು ಕರೆದ ದೇವರನ್ನು ನೀವಿಷ್ಟು ಬೇಗನೆ ತ್ಯಜಿಸಿ, ಬೇರೊಂದು 'ಶುಭಸಂದೇಶ'ವನ್ನು ಅಂಗೀಕರಿಸುತ್ತಿರುವರೆಂದು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ವಾಸ್ತವವಾಗಿ, ಬೇರೆ ಯಾವ ಶುಭಸಂದೇಶವೂ ಇಲ್ಲ. ಆದರೆ ಕೆಲವರು ನಿಮ್ಮಲ್ಲಿ ಗೊಂದಲವೆಬ್ಬಿಸಿ, ಕ್ರಿಸ್ತ ಯೇಸುವಿನ ಶುಭಸಂದೇಶವನ್ನು ಮಾರ್ಪಡಿಸಲು ಯತ್ನಿಸುತ್ತಾ ಇದ್ದಾರೆ. ನಾವು ನಿಮಗೆ ಬೋಧಿಸಿದ ಶುಭಸಂದೇಶಕ್ಕೆ ವಿರುದ್ದವಾದ ಸಂದೇಶವನ್ನು ನಾವೇ ಆಗಲಿ, ಸ್ವರ್ಗದಿಂದ ಇಳಿದ ದೇವದೂತನೇ ಆಗಲಿ, ಯಾರೇ ಆಗಲಿ ಬೋಧಿಸಿದರೆ ಅವರು ಶಾಪಗ್ರಸ್ತನಾಗಲಿ! ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ದವಾದ ಸಂದೇಶವನ್ನು ಸಾರುವವನು ಶಾಪಗಸ್ತನಾಗಲಿ ಎಂದು ನಾನು ಮೊದಲು ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದೇನೆ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಲು ಯತ್ನಿಸುತ್ತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ ಕ್ರಿಸ್ತಯೇಸುವಿನ ದಾಸನಾಗಲು ಸಾಧ್ಯವೇ ಇಲ್ಲ. ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ. ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ. ಯೇಸುಕ್ರಿಸ್ತರೇ ನನಗದನ್ನು ಶ್ರುತುಪಡಿಸಿದರು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 111 : 1-2, 7-8, 9, 10, V.5
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ.

1. ಸಜ್ಜನರ ಸಂಘದೊಳು ಸಭಾಸದಸ್ಯರೊಳು ಕೂಡಿ
ಹೊಗಳುವೆ ಪ್ರಭುವನು ಮನಃಪೂರ್ವಕವಾಗಿ ಹಾಡಿ
ಮಹತ್ತಾದವು ಪ್ರಭುವಿನಾ ಕಾರ್ಯಗಳು
ಕೊಂಡಾಡುವರು ಅವುಗಳನ್ನು ಭಕ್ತಾದಿಗಳು
ಶ್ಲೋಕ

2. ನೀತಿ ಸತ್ಯತೆಯುಳ್ಳವು ಆತನ ಸತ್ಕಾರ್ಯಗಳು
ಸುಸ್ಥಿರವಾದವು ಆತನ ನಿಯಮನಿಬಂಧನೆಗಳು
ಯುಗಯುಗಾಂತರಕು ದೃಢವಾಗಿರುವುವು
ಸತ್ಯ ನೀತಿಗಳು ಅವುಗಳಿಗೆ ಅಡಿಪಾಯವು
ಶ್ಲೋಕ

3. ವಿಮೋಚನೆಯನಿಹನು ಪ್ರಭು ತನ್ನ ಪ್ರಜೆಗೆ
ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ
ಪರಿಶುದ್ಧ, ಪರಮ ಪೂಜ್ಯ ಆತನ ನಾಮಾಂಕೆ
ಪ್ರಭುವಿಗೆ ಸ್ತೋತ್ರ ಸದಾಕಾಲವು
ಶ್ಲೋಕ

ಘೋಷಣೆ (ಕೀರ್ತನೆ 119:18)
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ ನನ್ನ ಕಣ್ಣುಗಳಿಂದ ನೀ ತೆಗೆದುಬಿಡು ಅಂಧತೆ
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:25-37
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ನನ್ನ ನೆರೆಯವನು ಯಾರು?"

ಆ ಕಾಲದಲ್ಲಿ ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುವನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು. ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?” ಎಂದು ಮರುಪ್ರಶ್ನೆ ಹಾಕಿದರು. ಅವನು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು ಎಂದಿದೆ,” ಎಂದು ಉತ್ತರ ಕೊಟ್ಟನು. ಯೇಸು, “ಸರಿಯಾಗಿ ಉತ್ತರ ಕೊಟ್ಟೆ. ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು,” ಎಂದನು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿ ಕೊಳ್ಳಲು, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು: “ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ, ಅಲ್ಲೇ ಬಿಟ್ಟುಹೋದರು. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕ ಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, 'ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ,' ಎಂದ. "ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವರೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನೂ ಹಾಗೆಯೇ ಮಾಡು," ಎಂದು ಹೇಳಿದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

6 days ago | [YT] | 7

Krista Dani

04-10-26
ಅಕ್ಟೋಬರ್ - 04 - ಭಾನುವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತೇಳನೇ ಭಾನುವಾರ
ಪೂಜಾವಿಧಿ ವರ್ಷ-1
ಕೀರ್ತನಾ ಮಂಜರಿ: ವಾರ 3
ಪೂಜಾವಸ್ತ್ರ: ಹಸಿರು

ಅಸ್ಸಿಸಿಯ ಸಂತ ಫ್ರಾನ್ಸಿಸ್ (ಸ್ಮರಣೆ)

ದೈವವಾಕ್ಯದ ವಿಧಿ

"ನಾವು ಮಾಲಿಕರಲ್ಲ, ನಂಬಿಗಸ್ತ ಕೆಲಸಗಾರರು"

ಮೊದಲನೆಯ ವಾಚನ
ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 5:1-7

"ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ"

ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು
ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು:
ಪ್ರಿಯತಮನಿಗೆ ಮತ್ತೊಂದು ದ್ರಾಕ್ಷಿಯ ತೋಟ
ಫಲವತ್ತಾಗಿಹ ಗುಡ್ಡದ ಮೇಲಿನ ತೋಟ.
ಆರಿಸಿ ಎಸೆದನು ಕಲ್ಲುಮುಳ್ಳುಗಳನು
ಅಗೆದು ಹದಮಾಡಿದನಾತ ಗುಡ್ಡವನು.
ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು
ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು
ಕಟ್ಟಿದನು ಅದರೊಳಗೆ ಆಲೆಯೊಂದನು.
ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು,
ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು!
ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ:
"ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. ನನ್ನ ತೋಟಕ್ಕಾಗಿ ನಾನು ಮಾಡಿದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ:
ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ.
ಕೆಡವಿ ಹಾಕುವೆನು ಅದರ ಗೋಡೆಯನು; ಈಡಾಗುದದು ಪರರ ತುಳಿದಾಟಕ್ಕೆ. ಬಂಜರು ಭೂಮಿಯಾಗಿಸುವೆನು ಅದನ್ನು;
ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ. ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ.
ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ.
ನ್ಯಾಯನೀತಿಯನು ನಿರೀಕ್ಷಿಸಿದನಾತ, ಆದರೆ ಸಿಕ್ಕಿತವನಿಗೆ ರಕ್ತಪಾತ!
ಸತ್ಸಂಬಂಧವನು ಎದುರುನೋಡಿದನಾತ, ಇಗೋ ದಕ್ಕಿತವನಿಗೆ ದುಃಖಿತರ ಆರ್ತನಾದ!

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 80:11,12-15,18-19,V. ಯೆಶಾಯ 5:7
ಶ್ಲೋಕ: ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸಧಾನ್ಯವನು

1. ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ
ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ
ಹರಡಿವೆ ಅದರ ಕೊಂಬೆಗಳು ಸಮುದ್ರದವರೆಗೆ
ಬೆಳೆದಿವೆ ಆ ರೆಂಬೆಗಳು ಮಹಾನದಿಯವರೆಗೆ
ಶ್ಲೋಕ

2. ಕಿತ್ತು ಹಾಕಿದೆಯೇಕೆ ಅದರ ಬೇಲಿಯನು?
ತರಿದು ಬಿಡುವವರಲ್ಲವೆ ದಾರಿಗರು ಅದನು?
ನಾಶಮಾಡುವುವು ಅದನು ಕಾಡಹಂದಿಗಳು
ತಿಂದುಹಾಕುವುವು ಅದನು ಅರಣ್ಯ ಮೃಗಗಳು
ಶ್ಲೋಕ

3. ಸರ್ವಶಕ್ತನಾದ ದೇವರೇ, ಮರಳಿ ಮುಖತೋರಿಸು
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು
ಕಾಪಾಡು, ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು
ಕಾದಿರಿಸು, ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು
ಶ್ಲೋಕ

4. ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು
ಪುನರ್ಜೀವಗೊಳಿಸು, ಮಾಡುವೆವು ನಿನ್ನ ನಾಮಸ್ಮರಣೆಯನು
ಸರ್ವಶಕ್ತನಾದ ದೇವನೇ, ಉದ್ಧರಿಸು ನಮ್ಮನು
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು
ಶ್ಲೋಕ

ಎರಡನೆಯ ವಾಚನ
ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 4:6-9

"ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು"

ಸಹೋದರರೇ, ಯಾವ ವಿಷಯದಲ್ಲಿ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗೃಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು. ಕಡೆಯದಾಗಿ ಸಹೋದರರೇ, ಯಾವುದು ಸತ್ಯವು - ಮಾನ್ಯವು, ನ್ಯಾಯವು - ಶುದ್ಧವು, ಪ್ರೀತಿಕರವು - ಮನೋಹರವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ. ನೀವು ನನ್ನಿಂದ ಕಲಿತವು ಹಾಗು ಅರಿತವುಗಳನ್ನು, ಕೇಳಿದೆವು ಹಾಗು ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಘೋಷಣೆ (ಯೊವಾನ್ನ 17:17)
ಅಲ್ಲೆಲೂಯ ಅಲ್ಲೆಲೂಯ!
ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ ನಿಮ್ಮ ಮಾತೆ ಸತ್ಯ
ಅಲ್ಲೆಲೂಯ

ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 21:33-43
ಪ್ರಭೂ ನಿಮಗೆ ಮಹಿಮೆ ಸಲ್ಲಲಿ

"ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು"

ಆ ಕಾಲದಲ್ಲಿ ಯೇಸು ಮುಖ್ಯಯಾಜಕರಿಗೂ ಹೀಗೆಂದರು:
"ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿಯಾಯಿತು. ಕಟ್ಟಕಡೆಗೆ ಯಜಮಾನ, 'ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು' ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, 'ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,' ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು.
ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರಿಗೆ ಏನು ಮಾಡುವನು?" ಎಂದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು," ಎಂದು ಅಲ್ಲಿದ್ದವರು ಉತ್ತರ ಕೊಟ್ಟರು. ಬಳಿಕ ಯೇಸು ಇಂತೆಂದರು: " 'ಮನೆಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!' ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, 'ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು."

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

ಆಮೆನ್

1 week ago | [YT] | 4

Krista Dani

03-10-26
ಅಕ್ಟೋಬರ್ - 03 - ಶನಿವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತಾರನೆಯ ವಾರ
ಪೂಜಾವಿಧಿ ವರ್ಷ- 2
ಕೀರ್ತನಾ ಮಂಜರಿ: ವಾರ 2
ಪೂಜಾವಸ್ತ್ರ: ಹಸಿರು

ಬ್ರೋನ್ ಸಂತ ಜೆರಾರ್ಡ್ (ಸನ್ಯಾಸಿ) (ವಯಸ್ಸು - 64) (0895-0959)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಯೋಬನ ಗ್ರಂಥದಿಂದ ಇಂದಿನ ವಾಚನ 42:1-3,5-6,12-16

"ಈಗಲಾದರೋ ನಿಮ್ಮನ್ನು ಕಂಡಿದ್ದೇನೆ ನನ್ನ ಕಣ್ಣುಗಳಿಂದ ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ."

ಯೋಬನು ಸರ್ವೇಶ್ವರಸ್ವಾಮಿಗೆ ಕೊಟ್ಟ ಉತ್ತರ ಇದು: "ತಾವು ಎಲ್ಲಾ ಕಾರ್ಯಗಳನು ನಡೆಸಲು ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ.
'ಅಜ್ಞಾನದ ಮಾತುಗಳನ್ನಾಡುವ ನೀನು ಯಾರು?'
'ಸತ್ಯಾಲೋಚನೆಗಳನು ಮಂಕುಮಾಡುವ ನೀನಾರು?'
ಈ ನಿಮ್ಮ ನುಡಿಯಂತೆ ಅರ್ಥಹೀನ ಮಾತುಗಳನು ನಾನಾಡಿದೆ. ಈವರೆಗೆ ನಿಮ್ಮನ್ನು ಕುರಿತು ನಾನು ಕೇಳಿದ್ದು ಬೇರೆಯವರಿಂದ
ಈಗಲಾದರೋ ನಿಮ್ಮನ್ನು ಕಂಡಿದ್ದೇನೆ ನನ್ನ ಕಣ್ಣುಗಳಿಂದ.
ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ
ಬೂದಿಯೊಳು, ಧೂಳಿನೊಳು ಕುಳಿತು ಪಶ್ಚಾತ್ತಾಪಪಡುತ್ತೇನೆ," ಎಂದನು.
ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಅಧಿಕಗೊಳಿಸಿ ಆಶೀರ್ವದಿಸಿದರು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು. ಅಲ್ಲದೆ ಏಳು ಮಂದಿ ಗಂಡು ಮಕ್ಕಳು, ಮೂರು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು. ತರುವಾಯ ಯೋಬನು ನೂರನಾಲ್ವತ್ತು ವರ್ಷ ಬಾಳಿದನು. ನಾಲ್ಕು ತಲೆಮಾರುಗಳ ತನಕ ಮಕ್ಕಳನ್ನು ಮೊಮ್ಮಕ್ಕಳನ್ನೂ ಕಂಡನು. ಹಣ್ಣುಹಣ್ಣು ಮುದುಕನಾಗಿ ಸತ್ತನು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ: 119 : 66, 71, 75, 91,125, 130,V.135
ಶ್ಲೋಕ: ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ.

1. ಸುಜ್ಞಾನ ವಿವೇಕಗಳನು ಕಲಿಸೆನಗೆ
ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ
ಕಷ್ಟಾನುಭವವು ಆಯಿತೆನಗೆ ಹಿತಕರ
ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ
ಶ್ಲೋಕ

2. ನಾ ಬಲ್ಲೆ ಪ್ರಭೂ, ನಿನ್ನ ವಿಧಿಗಳು ನೀತಿಯುತವೆಂದು
ಕಷ್ಟಕ್ಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು
ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ
ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ
ಶ್ಲೋಕ

3. ನಿನ್ನ ದಾಸ ನಾನು,ದಯಪಾಲಿಸು ಎನಗೆ
ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ
ತರುವುದು ನಿನ್ನ ವಾಕ್ಯೋಪದೇಶ
ಸರಳ ಜನರಿಗೆ ಜ್ಞಾನಪ್ರಕಾಶ
ಶ್ಲೋಕ

ಘೋಷಣೆ (ಕೀರ್ತನೆ 111:7,8)
ಅಲ್ಲೆಲೂಯ, ಅಲ್ಲೆಲೂಯ!
ಸುಸ್ಥಿರವಾದವು ಆತನ ನಿಯಮನಿಬಂಧನೆಗಳು ಯುಗಯುಗಾಂತರಕು ದೃಢವಾಗಿರುವುವು
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:17-24
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ."

ಆ ಕಾಲದಲ್ಲಿ ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮಿ, ನಿಮ್ಮ ಹೆಸರಿನಲ್ಲಿ ಆಜ್ಞೆ ಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ," ಎಂದು ವರದಿಮಾಡಿದರು. ಅದಕ್ಕೆ ಯೇಸು, ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸು ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, "ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ: ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು," ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, "ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ," ಎಂದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

1 week ago | [YT] | 1

Krista Dani

02-10-26
ಅಕ್ಟೋಬರ್ - 02 - ಶುಕ್ರವಾರ

ಪವಿತ್ರ ಬೈಬಲ್ ದಿನಚರಿ
ಸಾಧಾರಣ ಕಾಲದ ಇಪ್ಪತ್ತಾರನೆಯ ವಾರ
ತಿಂಗಳ ಮೊದಲನೇ ಶುಕ್ರವಾರ
ಪೂಜಾವಿಧಿ ಮಂಜರಿ: ವಾರ 2
ಕೀರ್ತನಾ ಮಂಜರಿ: ವಾರ 2
ಪೂಜಾವಸ್ತ್ರ: ಬಿಳಿ

ಸಂರಕ್ಷಕ ದೂತರು (ಸ್ಮರಣೆ) (ಆರಂಭ ಸ್ಪೇಯಿನ್ 336)

ದೈವವಾಕ್ಯದ ವಿಧಿ

ಮೊದಲನೆಯ ವಾಚನ
ಯೋಬನ ಗ್ರಂಥದಿಂದ ಇಂದಿನ ವಾಚನ 38:1, 12-21, 40:3-5

"ಎಂದಾದರೂ 'ಅರುಣೋದಯವಾಗಲಿ' ಎಂದು ಆಜ್ಞಾಪಿಸಿರುವೆಯಾ? ನೀನೆಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ?"

ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು: “ನಿನ್ನ ಜೀವಮಾನದಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯಾ? ಧರಣಿಯ ಅಂಚುಗಳನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ ಅಪ್ಪಣೆ ಮಾಡಿದೆಯಾ? ಮುದ್ರೆಯೊತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪತಾಳುತ್ತದೆ ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ. ದುರುಳರಿಂದ ಬೆಳಕನ್ನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನ್ನು ಮುರಿಯಲಾಗುವುದು. ನೀನೆಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ? ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ? ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ! ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ? ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ? ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ದಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!’’ ಆಗ ಯೋಬನು ಸರ್ವೇಶ್ವರ ಸ್ವಾಮಿಗೆ ಇಂತೆಂದನು: “ಅಯ್ಯೋ, ನಾನು ಅಲ್ಪನೇ ಸರಿ, ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ. ಒಮ್ಮೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 139 : 1-3,7-8, 9-10, 13,14, V.24
ಶ್ಲೋಕ: ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ.

1. ಪ್ರಭೂ, ಪರಿಶೋಧಿಸಿರುವೆ ನೀ ನನ್ನನು, ಅರಿತುಕೊಂಡಿರುವೆ ಅಂತರಂಗವನು
ನಾ ಕೂರುವುದು ಏಳುವುದೂ ನಿನಗೆ ಗೊತ್ತಿದೆ
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
ಶ್ಲೋಕ

2. ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು?
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?
ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ
ಶ್ಲೋಕ

3. ನಾನರುಣನ ರೆಕ್ಕೆಗಳನೇರಿ ಹಾರಿದರೂ
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ
ಅಲ್ಲೂ ನನ್ನ ನಡೆಸುವುದು ನಿನ್ನ ಬಲಗೈ
ನನ್ನ ಹಿಡಿದಿರುವುದು ನಿನ್ನ ಬಲಗೈ
ಶ್ಲೋಕ

4. ನನ್ನ ಅಂತರಂಗವನು ಉಂಟುಮಾಡಿದಾತ ನೀನು
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ
ಶ್ಲೋಕ

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ
ಅಲ್ಲೆಲೂಯ!

ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:13-16
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ

"ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ."

ಆ ಕಾಲದಲ್ಲಿ ಯೇಸು ಹೀಗೆಂದರು: "ಕೋರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. " ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮನ್ನು ಆಲಿಸುವವನು ನನ್ನನೇ ಆಲಿಸುತ್ತಾನೆ; ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೇ ಅಲಕ್ಷ್ಯ ಮಾಡುತ್ತಾನೆ. ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ," ಎಂದರು.

ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

ಆಮೆನ್

1 week ago | [YT] | 2